ಪದ್ಮಗುಪ್ತ -
	ನವ ಸಹಸಾಂಕ ಚರಿತ ಎಂಬ 18 ಸರ್ಗಗಳ ಸಂಸ್ಕøತ ಕಾವ್ಯದ ಕರ್ತೃ ಕಾಲ ಸುಮಾರು 15ನೆಯ ಶತಮಾನ. ಪ್ರತಿ ಸರ್ಗದಲ್ಲೂ ಕವಿ ತಾನು ಮೃಗಾಂಕದತ್ತನ ಮಗನೆಂದೂ ತನಗೆ ಪರಿಮಳ ಎಂಬ ಮತ್ತೊಂದು ಹೆಸರೆಂದೂ ತಿಳಿಸಿದ್ದಾನೆ. ಬಿಲ್ಹಣನ ವಿಕ್ರಮಾಂಕದೇವ ಚರಿತೆಯಂತೆಯೇ ಇದೂ ತನ್ನ ಆಶ್ರಯದಾತ ಪರಮಾರ ವಂಶದ ವಿಕ್ರಮರಾಜನ ಪ್ರತಾಪ, ಪ್ರಭಾವಗಳ ವರ್ಣನೆಯಾಗಿದೆ. ಆ ವಿಕ್ರಮನ ಇನ್ನೊಂದು ಹೆಸರು ನವಸಹಸಾಂಕ ಮತ್ತು ಕುಮಾರನಾರಾಯಣ ಎಂದಿದೆ. ಕಾವ್ಯದ ಆದಿಯಲ್ಲಿ ಶಿವ ಸ್ತೋತ್ರವಿದೆ. ಕ್ರಿ.ಶ. 10ನೆಯ ಶತಕದಿಂದ ಸುಮಾರು 18ನೆಯ ಶತಕದವರೆಗೆ ಹೊರಬಿದ್ದ ಈ ಜಾತಿಯ ಕಾವ್ಯಗಳಲ್ಲಿ ಸಂಸ್ಕøತಭಾಷೆ, ಸಾಹಿತ್ಯ, ಸಂಪ್ರದಾಯ, ಸಮಯ ಹಾಗೂ ಸಂಸ್ಕøತಿ ಅಳಿಯದೆ ಬೆಳೆವಂತಾದುದೆ ಈ ಕಾವ್ಯಗಳಿಂದಾಗಿರುವ ಪ್ರಯೋಜನ. ಕಾವ್ಯ ಅತ್ಯುತ್ತಮ ದರ್ಜೆಯದಲ್ಲದಿದ್ದರೂ ಕಳಪೆಯದಲ್ಲ. ಹರ್ಷಚರಿತ, ವಿಕ್ರಮ ಚರಿತ ಇತ್ಯಾದಿ ಆಖ್ಯಾನಗಳನ್ನನುಸರಿಸಿ ರಚಿತವಾದ ಕಥಾಖ್ಯಾನವಿದು. ಶೈಲಿ ಸುಗಮವಾಗಿದೆ. ಸುಲಭಾರ್ಥಪ್ರದವಾಗಿದರೂ ಕಾವ್ಯದ ಧಾಟಿ ಧೋರಣೆಗಳು ಉದಾತ್ತ ವಸ್ತುವನ್ನು ಪುಷ್ಟೀಕರಿಸದೆ ನಾಯಕ ಪೂಜೆಯಲ್ಲಿ ಪರ್ಯವಸಾನಹೊಂದಿವೆ. ಇಲ್ಲಿ ಚರಿತ್ರೆಯ ಅಂಶ ಕಡಿಮೆ. ನಾಯಕನ ಹೊಗಳಿಕೆ ಹೆಚ್ಚು. ಕಾವ್ಯತೆ ಅಷ್ಟಕ್ಕಷ್ಟೆ.											    (ಜಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ